ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ. ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ರಾಜಧಾನಿ ಫ್ರೀಟೌನ್ ಅನ್ನು ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ೧೭೮೭ರಲ್ಲಿ ಸ್ಥಾಪಿಸಿದರು. ಮುಂದೆ ೧೮೦೮ರಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿತು. ೧೯೬೧ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶ, ೧೯೯೧ರಿಂದ ೨೦೦೨ರವರೆಗೆ ತೀವ್ರ ಅಂತಃಕಲಹ ಅನುಭವಿಸಿತು. ಈಗ ಶಾಂತಿಯುತವಾಗಿರುವ ಈ ದೇಶ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ. ಫ್ರೀಟೌನ್ ಸಿಯೆರ್ರಾ ಲಿಯೋನ್ನ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರ. ಎರಡನೇ ದೊಡ್ಡ ನಗರ ಬೋ. ಇತರೆ ಪ್ರಮುಖ ನಗರಗಳೆಂದರೆ ಕೆನೆಮಾ, ಮಕೇನಿ ಮತ್ತು ಕೊಯ್ಡು ಟೌನ್.